ಕಪಿಲರ್ : ತಮಿಳು ಸಾಹಿತ್ಯ ಚರಿತ್ರೆಯಲ್ಲಿ ಈ ಹೆಸರಿರುವ ನಾಲ್ಕು ಕವಿಗಳಿದ್ದಾರೆ. ಸಂಗಂ ಕಾಲದಲ್ಲೊಬ್ಬನೂ ಅನಂತರದ ಕತ್ತಲ ಯುಗ (3-6ನೆಯ ಶತಮಾನ) ದಲ್ಲೊಬ್ಬನೂ ಮಧ್ಯಕಾಲದಲ್ಲೊಬ್ಬನೂ (6ನೆಯ ಶತಮಾನದ ಅನಂತರ) ಇದ್ದಾರೆ. ಈ ನಾಲ್ವರೂ ಒಬ್ಬರೇ ಎಂದು ಈ ಶತಮಾನದ ಆರಂಭದ ತನಕವೂ ಪಂಡಿತರು ಎಣಿಸಿದ್ದರು. ಆದರೆ ಈಗ ಆ ಹೆಸರಿನ ನಾಲ್ವರಿದ್ದಾರೆಂದು ಎಲ್ಲರೂ ಒಪ್ಪುತ್ತಾರೆ.

ತೊಲ್ಕಪಿಲರ್ ಸಂಗಂ ಸಾಹಿತ್ಯದಲ್ಲಿ 20 ಹಾಡುಗಳನ್ನು ರಚಿಸಿದ್ದಾನೆ. ಕತ್ತಲ ಯುಗದ ಕಪಿಲರ್ ಇನ್ನಾನಾರ್ಪದ್ ಎಂಬ (ಯಾವಾವುದು ಕೆಟ್ಟುದು ಎಂದು ಹೇಳುವ) ನಲವತ್ತು ಪದ್ಯಗಳನ್ನು ಹಾಡಿದ್ದಾನೆ. ಮಧ್ಯಕಾಲದ ಕಪಿಲದೇವರ್ ಇರಟ್ಟೈ ಮಣಿಮಾಲೈ ಎಂಬ ಭಕ್ತಿಕೃತಿಯನ್ನು ರಚಿಸಿದ್ದಾನೆ. ಇವರು ಮೂವರಲ್ಲದೆ ಸಂಗಂ ಸಾಹಿತ್ಯದಲ್ಲಿ ಹೆಚ್ಚು ಸಂಖ್ಯೆಯ ಹಾಡುಗಳನ್ನು ಹಾಡಿರುವ ಕಪಿಲರ್ ಅನ್ನು ಕುರಿತು ಇಲ್ಲಿ ವಿವೇಚಿಸಲಾಗುತ್ತದೆ. ಈ ಕಪಿಲರ್ ಬರೆದವೆಂದು ಹೇಳಲಾದ 206 ಹಾಡುಗಳು ಸಂಗಂ ಕಾಲದ ಕಾವ್ಯ ಸಂಗ್ರಹದಲ್ಲಿ ದೊರೆಯುತ್ತವೆ.

ಈತನೇ ತನ್ನನ್ನು ಅಂದಣನ್-ಎಂದು ಹೇಳಿಕೊಂಡಿದ್ದಾನೆ. ಇತರ ಕವಿಗಳೂ ಅದನ್ನೇ ಹೇಳುತ್ತಾರೆ. ಅಂದಣನ್ ಎಂಬುದು ಇಂದಿನ ಬ್ರಾಹ್ಮಣ ಪದಕ್ಕೆ ಸಮಾನಾರ್ಥಕ. ಈತನ ಹಾಡುಗಳಲ್ಲಿ ಬರುವ ರಾಮಾಯಣ ಭಾರತ ಕಥಾಸನ್ನಿವೇಶಗಳನ್ನೊಳಗೊಂಡ ಉಪಮೆಗಳು, ಕುದುರೆಯ ಕುತ್ತಿಗೆಯ ಮೇಲಿನ ಕೂದಲನ್ನು ಬ್ರಾಹ್ಮಣ ಕುಮಾರನ ಜುಟ್ಟಿನಂತಿತ್ತೆಂದು ವರ್ಣಿಸಿರುವುದು, ಈ ವಿಷಯಗಳನ್ನು ಪುಷ್ಟೀಕರಿಸುತ್ತವೆಂಬುದು ಗಮನಿಸತಕ್ಕ ವಿಷಯ. ಈತನ ಜೀವನಚರಿತ್ರೆಯನ್ನು ಕುರಿತು ಬೇರೆ ವಿವರಗಳು ದೊರೆಯುವುದಿಲ್ಲ. ಆದರೂ ಈತನ ಹಾಡುಗಳಿಂದ ಇವನ ಬಾಳಿನ ಕೆಲ ಸನ್ನಿವೇಶಗಳನ್ನು ಎತ್ತಿ ಹೇಳಬಹುದು.

ಈತ ವೇಳ್ಪಾರಿ ಎಂಬ ಅರಸನ ಪ್ರಾಣಸ್ನೇಹಿತನಾಗಿಯೂ ಆಸ್ಥಾನಕವಿಯಾಗಿಯೂ ಇದ್ದ. ಆದರೂ ಇತರ ಕೆಲವು ರಾಜರಲ್ಲಿಗೆ ಹೋಗಿ ಅವರನ್ನು ಕುರಿತೂ ಈತ ಹಾಡಿದ್ದುಂಟು. ತಿರುಮುಡಿಕ್ಕಾರಿ ಎಂಬೊಬ್ಬ ಅರಸನ ಉದಾರತೆಯನ್ನು ಈತ ಹೊಗಳಿದ್ದಾನೆ. ಪೇಗನ್ ಎಂಬ ಇನ್ನೊಬ್ಬ ಅರಸ ತನ್ನ ಪತ್ನಿಯಾದ ಕಣ್ಣಗಿಯನ್ನು ತೊರೆದಿದ್ದಾಗ ಅವರಿಬ್ಬರನ್ನೂ ಕಪಿಲರ್ ಪುನಃ ಸೇರಿಸಿದನೆಂದು ಕಥೆ ಇದೆ. ವೇಳ್ಪಾರಿಯ ಕುಮಾರಿಯರು ಮದುವೆಯ ವಯಸ್ಕರಾಗಲು; ಚೇರ, ಚೋಳ, ಪಾಂಡ್ಯರೆಂಬ ರಾಜತ್ರಯರು (ಮೂವೇಂದರ್) ಅವರನ್ನು, ಮದುವೆ ಮಾಡಿಕೊಳ್ಳಲು ಬಂiÀÄಸಿದರು. ಆದರೆ ವೇಳ್ಪಾರಿ ಅವರಿಗೆ ತನ್ನ ಕುಮಾರಿಯರನ್ನು ಮದುವೆ ಮಾಡಿಕೊಡಲೊಪ್ಪಲಿಲ್ಲ. ಆದುದರಿಂದ ಕುಪಿತರಾದ ರಾಜರು ವೇಳ್ಪಾರಿಯ ಪರಂಬುಮಲೆಯೆಂಬ ರಾಜಧಾನಿಯನ್ನು ಮುತ್ತಿ, ಯುದ್ಧಮಾಡಿ, ಅದನ್ನು ವಶಮಾಡಿಕೊಂಡರು. ಆಮೇಲೆ ವೇಳ್ಪಾರಿಯೂ ಸತ್ತುಹೋದ. ಕಪಿಲರ್ ಇವನ ಕುಮಾರಿಯರಿಗೆ ವಿವಾಹಮಾಡಲು ಯೋಚಿಸಿ ಹಲವು ರಾಜರ ಹತ್ತಿರ ಹೋದ. ಮಲೆನಾಡಿಗೆ ಹೋಗಿ ಶೆಲ್ವಕಡುಂಗೋವಾಳಿಯಾದನ್ ಎಂಬವನನ್ನು ಹೊಗಳಿ ಹತ್ತು ಕವಿತೆಗಳನ್ನು ಹಾಡಿ, ಬಹುಮಾನ ಪಡೆದ. ಇತರ ಕೆಲವು ರಾಜರ ಹತ್ತಿರವೂ ಹೋದನಾದರೂ ಎಲ್ಲಿಯೂ ತನ್ನ ಉದ್ದೇಶ ಸಫಲವಾಗದಿರಲು ಆ ಕುಮಾರಿಯರನ್ನು ಬ್ರಾಹ್ಮಣರ ವಶಕ್ಕೆ ಕೊಟ್ಟು, ತಾನು ಉತ್ತರಾಭಿಮುಖಿಯಾಗಿ ಪ್ರಯಾಣ ಮಾಡುತ್ತ ಉಪವಾಸವ್ರತಮಾಡಿ ಜೀವ ಬಿಟ್ಟನೆಂದು ಹೇಳುತ್ತಾರೆ.

ಈತ ಕುರಿಂಜಿತ್ತಿಣೈ (ವಿವಾಹಪುರ್ವದ ಪ್ರೇಮದ ವರ್ಣನೆ. ಇದರಲ್ಲಿ ಬೆಟ್ಟಸ್ಥಳ, ಚಳಿಗಾಲ ಮತ್ತು ಮಧ್ಯರಾತ್ರಿಯ ವರ್ಣನೆಗಳಿರುತ್ತವೆ) ಹಾಡುವುದರಲ್ಲಿ ಬಲ್ಲಿದ. ಈತನ ಹಾಡುಗಳಲ್ಲಿ 91 ಕುರಿಂಜಿತ್ತಿಣೈ ಜಾತಿಗೆ ಸೇರಿದವು. ಕುರಿಂಜಿಪಾಟ್ಟು ಎಂಬ 261 ಚರಣಗಳುಳ್ಳ ಒಂದು ನೀಳ್ಗವಿತೆಯನ್ನೂ ಈತ ರಚಿಸಿದ್ದಾನೆ. ಈ ಕವಿತೆ ಆರ್ಯರಾಜನಾದ ಬೃಹದತ್ತನಿಗೆ ತಮಿಳು ಸಾಹಿತ್ಯರಸವನ್ನು ತಿಳಿಸಿಕೊಡುವುದಕ್ಕಾಗಿ ರಚಿತವಾದುದೆನ್ನುತ್ತಾರೆ. ಪ್ರಣಯಕಾರಣದಿಂದ ಶರೀರಕ್ಷೀಣತೆಯನ್ನು ಪಡೆದಿದ್ದ ನಾಯಿಕೆಯ ಸ್ಥಿತಿಯ ವರ್ಣನೆ ಇದರಲ್ಲಿ ಇದೆ. ನಾಯಿಕೆ ಸಖಿಯೊಡನೆ ಸ್ನಾನಮಾಡಿ, ಹಲವು ಬಗೆಯ ಹೂಗಳನ್ನು ಕೊಯ್ದು ಬೆಟ್ಟದಲ್ಲಿ ರಾಶಿಹಾಕಿದಳು ಎಂಬುದನ್ನು ಬಣ್ಣಿಸುವಾಗ 99 ಹೂಗಳ ಹೆಸರು ಬರುತ್ತದೆ.

ಸಾಮಾನ್ಯವಾಗಿ ಈತ ಸರಳವಾದ ಉಪಮೆಗಳ ಮೂಲಕ ಮಹತ್ತಾದ ವಿಷಯಗಳನ್ನು ಬಣ್ಣಿಸುವುದರಲ್ಲಿ ಬಲ್ಲಿದ. ನಾಯಿಕೆಯ ಆತ್ಮ ಕಿರಿದು, ಆದರೆ ಕಾಮ ಹಿರಿದು ಎಂಬುದನ್ನು, ಹಲಸಿನ ಮರದಲ್ಲಿಯ ಚಿಕ್ಕ ಕೊಂಬೆಯಲ್ಲಿ ದೊಡ್ಡ ಹಣ್ಣು ತೂಗುತ್ತಿರುವಂತೆ ಎಂದು ವರ್ಣಿಸುತ್ತಾನೆ.
ಪರ್ವತಪ್ರದೇಶದಲ್ಲಿಯ ಹಲವು ಪ್ರಕೃತಿದೃಶ್ಯಗಳನ್ನು ಅಲ್ಲಲ್ಲಿ ರಸವತ್ತಾಗಿ ವರ್ಣಿಸಲಾಗಿದೆ. ಕಿರಿಯ ಬೆಟ್ಟದಲ್ಲಿರುವ ಹೊಂಡದಲ್ಲಿ ಹಲವು ಹಣ್ಣುಗಳಿಂದುಂಟಾದ ಜೇನನ್ನು ನೀರೆಂದು ಕುಡಿದ ನವಿಲು ಆಯಾಸಗೊಂಡು ನಿಲ್ಲುತ್ತದೆ; ಅವರೆಯನ್ನು ತುಂಬ ತಿಂದ ಮಂಗ ಹಲವು ಸಾಮಾನುಗಳನ್ನು ಮಾರುವವರ ಚೀಲದಂತೆ ತೋರುತ್ತದೆ; ಹುಲಿಯನ್ನೆದುರಿಸಿದ ಆನೆ ಕನಸಿನಲ್ಲೂ ಅದನ್ನು ನೋಡಿ ಬೆಚ್ಚಿ ಎದ್ದು ಹೊಸದಾಗಿ ಹೂಬಿಟ್ಟ ಬೇಂಗೆಯ ಮರವನ್ನು ನೋಡಿ ಹುಲಿಯೆಂದು ಭ್ರಮಿಸಿ, ಹಾಯ್ದು, ಕೋಪ ತಣಿದ ಅನಂತರ ಅದನ್ನು ಮರವೆಂದು ತಿಳಿದು ನಾಚುತ್ತದೆ.-ಎಂಬಂಥ ಹಲವು ದೃಶ್ಯಗಳು ಇಲ್ಲಿಯ ಹಾಡುಗಳಲ್ಲಿ ಕಾಣಬರುತ್ತವೆ. 

ಕಪಿಲರ್ ತಾನು ಬಾಳಿದ ಕಾಲದಲ್ಲಿಯೇ ಇತರ ಕವಿಗಳ ಹೊಗಳಿಕೆಗೆ ಪಾತ್ರನಾದವ. ಈತನ ಜ್ಞಾನವನ್ನೂ ಕವಿತಾಸಾಮಾಥರ್ಯ್‌ವನ್ನೂ ಯಶಸ್ಸನ್ನೂ ಅನೇಕ ಕವಿಗಳು ಕೊಂಡಾಡಿದ್ದಾರೆ.                                                      (ಎಸ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ